Sunday, June 13, 2010

ಅಂತರಂಗ ಬ್ಲಾಗ್ ನಿಂದ ಕದ್ದ ಲೇಖನ


ವ್ಯವಹಾರ ಅನ್ನೋದು ನಮ್ಮ ರಕ್ತದಲ್ಲೇ ಬಂದಿಲ್ಲಾ ಕಣ್ರಿ!’ ಎಂದು ನನ್ನ ಸಹೋದ್ಯೋಗಿಯೊಬ್ಬರಿಗೆ ಹೇಳಿದ್ದಕ್ಕೆ ಅವರು ದೊಡ್ಡದಾಗಿ ನಕ್ಕು ’ಅದು ರಕ್ತದಲ್ಲಿ ಬರಬೇಕಾದ್ದಿಲ್ಲ, ಮನಸ್ಸಿನಲ್ಲಿದ್ದರಾಯಿತು, ರಿಸ್ಕ್ ತೆಗೆದುಕೊಂಡು ಮುಂದುಬರಬೇಕು ಎನ್ನುವುದು ವಂಶಪಾರಂಪರ್ಯವಾಗಿರಬೇಕು ಎಂದೇನು ಇಲ್ಲವಲ್ಲ’ ಎಂದರು.ಇತ್ತೀಚೆಗೆ ನನ್ನ ಮತ್ತೊಬ್ಬ ಗುಜರಾತ್ ಮೂಲದ ಸಹೋದ್ಯೋಗಿಯೊಬ್ಬರು once for all, for good ಎಂದು ನಮ್ಮ ಕಂಪನಿಯಿಂದ ರಿಟೈರ್‌ಮೆಂಟ್ ಪ್ಯಾಕೇಜ್ ತೆಗೆದುಕೊಂಡು ತಮ್ಮ ತಂದೆಯ ಬಿಸಿನೆಸ್ಸ್ ನೋಡಿಕೊಳ್ಳುವುದಕ್ಕೋಸ್ಕರ ಭಾರತಕ್ಕೆ ಹೊರಡುವ ಸುದ್ದಿಯ ಹಿನ್ನೆಲೆಯಲ್ಲಿ ನಾವು ಮಾತನಾಡಿಕೊಳ್ಳುತ್ತಿದ್ದೆವು.ನಾವು ಈ ಕಂಪನಿಯ ನೌಕರರಾಗಿ ಇಲ್ಲಿ ತೊಡಗಿಸುವ ಶ್ರಮವನ್ನೇ ನಮ್ಮ ನಮ್ಮ ಉದ್ಯಮದಲ್ಲಿ ತೊಡಗಿಸಿದ್ದೇ ಆದರೆ ಅದು ಖಂಡಿತವಾಗಿ ಮುಂದೆ ಬರುವುದುರಲ್ಲಿ ಸಂಶಯವಿಲ್ಲ, ಎಲ್ಲರೊಳಗೂ ಒಬ್ಬ ಆಂಟ್ರಪ್ರೀನರ್ (entrepreneur) ಇರುತ್ತಾನೆ, ಆ ಸುಪ್ತಾವಸ್ಥೆಯ ಮನಸ್ಥಿತಿಯನ್ನು ಜಾಗೃತಗೊಳಿಸಬೇಕಷ್ಟೇ ಎನ್ನುವುದು ನನ್ನ ಸಹೋದ್ಯೋಗಿಯ ವಾದ.ಅದಕ್ಕೆ ಪ್ರತಿಯಾಗಿ, ಬಿಸಿನೆಸ್ಸ್ ಎಂದರೆ ಸುಮ್ಮನೇ ಆಗುತ್ತಾ, ಹತ್ತರಲ್ಲಿ ಒಂಭತ್ತು ಮುಳುಗುವ ಸಾಧ್ಯತೆಯೇ ಹೆಚ್ಚಿರುವಾಗ, ಎಲ್ಲೋ ಒಂದು nitch ಏರಿಯಾ ಹಿಡಿದುಕೊಂಡು ಅದನ್ನೇ ಹಗಲೂ-ರಾತ್ರಿ ಧ್ಯಾನಿಸಿ ಮೇಲೆ ತಂದು ಅದನ್ನು ಬೆಳೆಸುವುದು ಅಂದರೆ ಸುಮ್ಮನೆಯೇ? ಅದಕ್ಕೆ ಈಗ - ಈ ಪರಿಸ್ಥಿತಿ, ಕಾಲ, ಸಂದರ್ಭ - ಇವೆಲ್ಲ ತಕ್ಕುವೇನು? ಎನ್ನುವುದು ನನ್ನ ವಾದ.ನಾವು ಮೊದಲಿನಿಂದಲೂ ಅಷ್ಟೇ, ದಕ್ಷಿಣ ಭಾರತೀಯರು. ಸರ್ಕಾರಿ ಕೆಲಸ ಸಿಗುವುದು ನಮ್ಮ ಮನೆತನಗಳಲ್ಲಿ ದೊಡ್ಡ ವಿಷಯ, ತಲ-ತಲಾಂತರದಿಂದ ಸರ್ಕಾರದ ಸೇವೆ ದೇವರ ಸೇವೆ ಎಂದು ಬೆಳೆದುಬಂದವರು ನಾವು. ಈ ಬಿಸಿನೆಸ್ಸ್ ಸ್ಯಾವಿ ಮನಸ್ಸು, ಅದರ ಒಳ-ಹೊರಗಿನ ಸೆನ್ಸಿಟಿವಿಟಿಗಳು ನಮಗೆ ತಿಳಿದವೇ? ನಮಗೆ ಒಂದು ಸಹಾಯ ಹಸ್ತವೂ ಇಲ್ಲದಿರುವಾಗ ಯಾವ ಪಾರ್ಟನರುಗಳನ್ನು ನೆಚ್ಚಿಕೊಂಡು ಏನನ್ನು ಸಾಧಿಸೋದು? ಬಿಸಿನೆಸ್ಸು ಎಂದರೆ ಯಾವ ರಂಗವನ್ನು ಆಯ್ದುಕೊಳ್ಳೋದು? ಅದರ ಮಾರ್ಕೆಟ್ ರಿಸರ್ಚ್ ಮಾಡುವವರು ಯಾರು? ಮಾಡುವುದು ಯಾವಾಗ? ಅದಕ್ಕೆ ತಕ್ಕ ಇನ್‌ವೆಸ್ಟ್‌ಮೆಂಟ್ ಎಲ್ಲಿಂದ ತರೋದು? ಕಷ್ಟಮರುಗಳು ಯಾರು? ಕಂಪನಿಯ ಧ್ಯೇಯ-ಧೋರಣೆಗಳೇನು? ಉತ್ಪಾದಿಸುವ ವಸ್ತು ಯಾವುದು? ಕೊಡುವ ಸೇವೆ ಏನು, ಇತ್ಯಾದಿ ಇತ್ಯಾದಿ...ಪುಂಖಾನುಪುಂಕ ಪ್ರಶ್ನೆಗಳು ಶುರುವಷ್ಟೇ ಇದು.ಇದೇ ದಿನ ಮಧ್ಯಾಹ್ನ ಟೆಕ್ಸಾಸ್‌ ಮೂಲದ ಬಿಸಿನೆಸ್ಸ್ ಅನ್ನು ನಮ್ಮ ಕಂಪನಿಗೆ ಪರಿಚಯಿಸಲು ವಿಸಿಟರ್ರ್ ಒಬ್ಬರು ಬಂದಿದ್ದರು. ಅವರು ಭಾರತೀಯ ಮೂಲದವರು ಎಂದು ತಿಳಿದು ಆಶ್ಚರ್ಯದ ಜೊತೆ ಸಂತೋಷವೂ ಆಯಿತು. ಗಂಡ-ಹೆಂಡತಿ ಇಬ್ಬರು ಸೇರಿ ಅಮೇರಿಕದಲ್ಲಿ ಒಂದು ಕನ್ಸಲ್‌‍ಟಿಂಗ್ ಕಂಪನಿಯನ್ನು ತೆರೆದಿದ್ದಾರೆ, ಅದರ ಮಾರ್ಕೆಟಿಂಗ್‌ನಿಂದ ಹಿಡಿದು ಎಲ್ಲ ವಿಷಯವನ್ನೂ ಗಂಡ-ಹೆಂಡತಿಯೇ ನೋಡಿಕೊಳ್ಳುತ್ತಾರೆ ಎಂದು ತಿಳಿದು ಆಶ್ಚರ್ಯವಾಯಿತು. ೨೦೦೬ ರಲ್ಲಿ ಕೆಲಸ ಕಳೆದುಕೊಂಡ ಅವರು ಒಂದು ಹೊಸ ಕಂಪನಿಯನ್ನು ಹುಟ್ಟುಹಾಕಿ ಒಂದು ಮಟ್ಟಕ್ಕೆ ಬೆಳೆಸಿದ್ದು ಈ ಎಕಾನಮಿಯಲ್ಲಿ ಗಮನಾರ್ಹವೇ.ಹೀಗೆ ಅಲ್ಲಲ್ಲಿ ಹಲವಾರು ಯಶಸ್ಸಿನ ಹಾಗೂ ಫೇಲಾದ ಉದ್ಯಮಗಳು ಕೇಳಿಬರುವುದು ಸಹಜ, ಆದರೆ ನನ್ನ ಮನಸ್ಸು ಮಾತ್ರ ಪೇ-ಚೆಕ್ ನಿಂದ ಪೇ-ಚೆಕ್‌ಗೆ ಅಂಟಿಕೊಂಡು ಬಿಟ್ಟಿದೆ. ರಿಸ್ಕ್ ತೆಗೆದುಕೊಳ್ಳುವುದಿರಲಿ, ಅದರ ಬಗ್ಗೆ ಯೋಚಿಸುವುದಕ್ಕೂ ಪುರುಸೊತ್ತು ಇಲ್ಲ ಎನ್ನುವಂತಾಗಿದೆ.ನಿಮ್ಮ ನಿಮ್ಮ ಪರಿಸ್ಥಿತಿ ಏನು? ನೀವು ನಿಮ್ಮದೇ ಬಿಸಿನೆಸ್ಸ್ ಆರಂಭಿಸಿದ್ದೀರೋ ಅಥವಾ ಬೇರೆಯವರ ಬಿಸಿನೆಸ್ಸಿನಲ್ಲಿ ಒಂದಾಗಿ ಹೋಗಿದ್ದೀರೋ?